Home Page
 

ಸಂಪಾದಕ ಮಂಡಳಿಯ ನುಡಿ

ಕನ್ನಡ ಸಾಹಿತ್ಯದ ತವನಿಧಿಗಳಲ್ಲಿ ದಾಸಸಾಹಿತ್ಯವೂ ಒಂದು. ಓದಲಾರದ ಕನ್ನಡ ಜನಕ್ಕೆ ಪಂಪನಂತಹ ಪ್ರೌಢಕವಿಗಳು ಗೊತ್ತಿರಲಿ ಬಿಡಲಿ, ದಾಸರ ಹಾಡುಗಳು ಗೊತ್ತಿಲ್ಲದವರು ಮಾತ್ರ ಅಪರೂಪ. ಜನರ ಮೇಲೆ ನಿರಂತರ ಪ್ರಭಾವವನ್ನು ಬೀರುವ ಜನಸಮ್ಮುಖತೆ ದಾಸಸಾಹಿತ್ಯದ ಪ್ರಮುಖ ಲಕ್ಷಣಗಳಲ್ಲಿ ಒಂದು. ಇಂತಹ ದಾಸರ ಹಾಡುಗಳು ಜ್ಞಾನ ಸಂಪದ ಹಾಗೂ ಭಕ್ತಿಸಂಪದಗಳ ಸಾರ್ವತ್ರಿಕ ಹಬ್ಬುಗೆಗೆ ಸಾಧನವಾಗಿ ಪರಿಣಮಿಸಿವೆ. ಕನ್ನಡ ನಾಡಿನಾದ್ಯಂತ ಎಲ್ಲ ಸ್ತರಗಳಲ್ಲಿ ವರ್ಗ-ವರ್ಣಗಳ ಭೇದವಿಲ್ಲದೆ, ಜನರ ಬಾಯಲ್ಲಿ ಉಳಿದುಕೊಂಡು ಬಂದ ಈ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದ ಶ್ರೇಯಸ್ಸು ಬಾಸೆಲ್ ಮಿಶನ್ನಿನ ರೆ. ಹರ್ಮನ್ ಮೊಗ್ಲಿಂಗ್‍ರಿಗೆ ಸೇರುತ್ತದೆ. ಇವರು ತಮ್ಮ ಇಲ್ಲಿಯ ವಾಸ್ತವ್ಯದಲ್ಲಿ 1836ರಿಂದ ನಾಲ್ಕುನೂರಕ್ಕೂ ಮಿಕ್ಕಿದ ದಾಸರ ಪದಗಳನ್ನು ಸಂಗ್ರಹಿಸಿದ್ದರು. ಅವುಗಳಲ್ಲಿಯ ಒಂದು ನೂರು ಪದಗಳ ಸಂಗ್ರಹವನ್ನು `ದಾಸರ ಪದಗಳು' ಎಂಬ ಹೆಸರಿನಿಂದ ಕ್ರಿ. ಶ. 1850ರಲ್ಲಿ ಮತ್ತೆ ಕ್ರಿ.ಶ. 1852ರಲ್ಲಿ 174 ಪದಗಳುಳ್ಳ ಸಂಕಲನವನ್ನು ಮಂಗಳೂರಿನಲ್ಲಿ ಕಲ್ಲಚ್ಚಿನಲ್ಲಿ ಛಾಪಿಸಿ ಪ್ರಕಟಿಸಿದರು. ಈ ವಿಷಯವನ್ನು 1873ರಲ್ಲಿ ಪ್ರಕಟವಾದ ಇಂಡಿಯನ್ ಎಂಟಿಕ್ವೆರಿಯ `On the Karnataka Vaishnava Dasas' - ಎಂಬ ತಮ್ಮ ಲೇಖನದಲ್ಲಿ ರೆ. ಕಿಟೆಲ್ಲರು ಕಾಣಿಸಿದ್ದಾರೆ. ಇದರಿಂದ ಕಿಟೆಲ್‍ರಂಥವರು ಕೂಡ ದಾಸರ ಪದಗಳ ಮಹತ್ವವನ್ನು ಮತ್ತು ಜನಪ್ರಿಯತೆಯನ್ನು ಗುರುತಿಸಿದ್ದರು ಎಂಬುದು ಗೊತ್ತಾಗುತ್ತದೆ. ಪ್ರಾಸಂಗಿಕವಾಗಿ ಇದುವೆ ದಾಸಸಾಹಿತ್ಯದ ಕುರಿತಾದ ಮೊದಲ ಲೇಖನವೂ ಆಗಿದೆ.

ಆನಂತರದ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಹಲವಾರು ಜನರು ಕೆಲಸವನ್ನು ಮುಂದುವರಿಸಿದರು. ರೆ. ಮೊಗ್ಲಿಂಗರ `ದಾಸರ ಪದಗಳು' ಇದರ ದ್ವಿತೀಯ ಆವೃತ್ತಿಯನ್ನು 174 ಪದಗಳೊಂದಿಗೆ 1871ರಲ್ಲಿ ಜಾನ್ ಗ್ಯಾರೆಟರ ಸೂಚನೆಯ ಮೇರೆಗೆ ಹೊಳಕಲ್ಲು ನರಸಿಂಹಯ್ಯನವರು ಬೆಂಗಳೂರಿನಿಂದ ಪ್ರಕಟಿಸಿದರು. 1873ರಲ್ಲಿ ಹಿಂದೂ ಭಾಷಾ ಸಂಜೀವಿನೀ ಮುದ್ರಣ ಶಾಲೆಯಲ್ಲಿ `ಹರಿಭಜನೆ, ಕೀರ್ತನೆ' ಎಂಬ ಸಂಗ್ರಹ ಪ್ರಕಟವಾಯಿತು. 1890ನೆ ದಶಕದಲ್ಲಿ ಬೆಳಗಾವಿಯ ಆಬಾಜಿ ರಾಮಚಂದ್ರ ಸಾವಂತ ಇವರು ದೇವನಾಗರಿ ಲಿಪಿಯಲ್ಲಿ “ದಾಸರ ಪದಗಳ ಸಂಗ್ರಹವು” ಎಂಬುದಾಗಿ ಎರಡು ಭಾಗಗಳಲ್ಲಿ ಪ್ರಕಟಿಸಿದರು.ಆ ದಶಕದಲ್ಲಿಯೇ ಮಡಕಶಿರಾದ ಬಾಲಕೃಷ್ಣರಾಯರು 1894ರಲ್ಲಿ `ಪುರಂದರ ದಾಸರು ಮೊದಲಾದ ಅಪರೋಕ್ಷ ಜ್ಞಾನಿಗಳ ಪದಗಳು' ಎಂಬ ಪುಸ್ತಕವನ್ನು ತೆಲುಗು ಲಿಪಿಯಲ್ಲಿ ಮುದ್ರಿಸಿದ್ದು ಗಮನಾರ್ಹವಾಗಿದೆ.ಮತ್ತೆ 1908ರಲ್ಲಿ ಅವರೇ ಇನ್ನೊಂದು ಸಂಕಲನವನ್ನೂ ಪ್ರಕಟಿಸಿದ್ದಾರೆ.

ಹೀಗೆ 1850ರಷ್ಟು ಹಿಂದೆಯೇ ಪ್ರಾರಂಭವಾದ ದಾಸರ ಪದಗಳ ಸಂಗ್ರಹ ಹಾಗೂ ಪ್ರಕಟಣೆಯ ಕಾರ್ಯಕ್ಕೆ ಒಂದು ವ್ಯವಸ್ಥಿತ ರೂಪವನ್ನು ಕೊಟ್ಟು, ನಾಡಿನಾದ್ಯಂತ ಹರಿದು ಹಂಚಿಹೋದ, ಜನರ ಬಾಯಲ್ಲಿ ಉಳಿದುಕೊಂಡು ಬಂದ ವಿವಿಧ ದಾಸರ ಪದಗಳನ್ನು ಸಂಗ್ರಹಿಸಿ ಪ್ರಕಟಿಸಲು ಪ್ರಾರಂಭಿಸಿದವರು ಉಡುಪಿಯ ಪಾವಂಜೆ ಗುರುರಾಯರು. ಅವರು 1914ರಲ್ಲಿ ಪ್ರಕಟಿಸಿದ ಮೊದಲ ಸಂಕಲನದ ಹೆಸರು `ಉದಯರಾಗವು' ಎಂಬುದು. ಅನಂತರದ ದಿನಗಳಲ್ಲಿ ಪುರಂದರದಾಸರ ಕೀರ್ತನೆಗಳನ್ನು ಐದು ಸಂಪುಟಗಳಲ್ಲಿ ಮತ್ತು ಉಳಿದ ದಾಸರ ಕೃತಿಗಳನ್ನು ಬಿಡಿಬಿಡಿಯಾಗಿ ಪ್ರಕಟಿಸಿದರು. ಹೀಗೆ ನಾಡಿನ ದಕ್ಷಿಣದ ಅಂಚಿನ ಉಡುಪಿಯಲ್ಲಿ ಪ್ರಾರಂಭವಾದ ಕೆಲಸವನ್ನು ಉತ್ತರದ ಅಂಚಿನ ಲಿಂಗಸುಗೂರಿನಲ್ಲಿ ಗೊರಾಬಾಳ ಹಣಮಂತರಾಯರು `ವರದೇಂದ್ರ ಸಾಹಿತ್ಯ ಮಾಲೆ'ಯನ್ನು ಪ್ರಾರಂಭಿಸಿ ತಮ್ಮ ಇಡೀ ಜೀವನವನ್ನೇ ಹರಿದಾಸ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಗೆ ಮೀಸಲಾಗಿರಿಸಿದರು. ಇತ್ತ ಮೈಸೂರು ಭಾಗದಲ್ಲಿ ಸುಪ್ರಸಿದ್ಧ ದಾಸರ ಹಾಡುಗಳನ್ನು ತಕ್ಕಮಟ್ಟಿಗೆ ಶಾಸ್ತ್ರಶುದ್ಧವಾಗಿ ಪ್ರಕಟಿಸಲು ಸುಬೋಧ ರಾಮರಾಯರು ಮುಂದಾದರು. ಇದೇ ಬಗೆಯ ಕೆಲಸವನ್ನು ಧಾರವಾಡ ಪ್ರದೇಶದಲ್ಲಿ ನಾರಾಯಣರಾವ ಕಲಮದಾನಿ, ಹುಚ್ಚರಾವ ಬೆಂಗೇರಿ ಹಾಗೂ ಬೆಟಗೇರಿ ಕೃಷ್ಣಶರ್ಮರು ಮಾಡಿದರು. ಇದರೊಂದಿಗೆ, ಭಜನೆಯ ದೃಷ್ಟಿಯಿಂದ ಅನುಕೂಲವಾಗುವಂತೆ ನಾಡಿನ ವಿವಿಧ ಭಾಗಗಳಲ್ಲಿ ದಾಸಸಾಹಿತ್ಯಾಸಕ್ತರು ತಮತಮಗೆ ಬೇಕಾದ ಪದಗಳ ಸಂಗ್ರಹವನ್ನು ಪ್ರಕಟಿಸತೊಡಗಿದರು. ಇದರಿಂದಾಗಿ ನಾಡಿನ ಬಹುತೇಕ ಭಾಗಗಳಲ್ಲಿ ಬೇರೆ ಬೇರೆ ದಾಸರು ಇದ್ದುದು ಮತ್ತು ಅವರು ಹಾಡುಗಳನ್ನು ಬರೆದಿದ್ದಾರೆ ಎಂಬುದು ಗಮನಕ್ಕೆ ಬಂದಿತು. ಅದು `ದಾಸ-ಪೀಳಿಗೆ' ಯನ್ನು ಗುರುತಿಸಲು ಸಹಾಯವಾಯಿತು.

ಶ್ರೀಪಾದರಾಜರಿಂದ ಪ್ರಾರಂಭವಾದ ಕೀರ್ತನೆಗಳ ರಚನೆಯ ಸಂಪ್ರದಾಯವು ಈ ಐದುನೂರು ವರ್ಷಗಳಲ್ಲಿ ಸುಮಾರು ಮೂರುನೂರಾ ಐವತ್ತು ಜನ ದಾಸರು ಹುಟ್ಟಿ ಮೂವತ್ತು ಸಾವಿರಕ್ಕೂ ಮಿಕ್ಕ ಕೀರ್ತನೆಗಳನ್ನು ರಚಿಸಿದ್ದಾರೆಂದರೆ ಅವುಗಳ ಮಹತ್ವ ಗೊತ್ತಾಗದೇ ಇರದು.

ಇಡಿಯಾಗಿ-ಬಿಡಿಬಿಡಿಯಾಗಿ ವ್ಯಕ್ತಿಗಳಿಂದ, ಸಂಘ ಸಂಸ್ಥೆಗಳಿಂದ ದಾಸರ ಪದಗಳು ಪ್ರಕಟವಾಗುತ್ತ ಬರುತ್ತಿರುವಾಗಲೇ ಪುರಂದರ ಕನಕದಾಸರ ಚತುಃಶತಮಾನೋತ್ಸವ ಸಂದರ್ಭಗಳಲ್ಲಿ ಅವರ ಸಮಗ್ರ ಕೃತಿಗಳು ಸರ್ಕಾರದಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಪ್ರಕಟವಾದವು. ಆದರೆ ಸಮಗ್ರ ದಾಸಸಾಹಿತ್ಯದ ಪ್ರಕಟಣೆ ಈವರೆಗೆ ಆಗಲೇ ಇಲ್ಲವೆಂದು ಹೇಳಬಹುದು. ಇಂಥದೊಂದು ಪ್ರಯತ್ನವನ್ನು ಮೂರು ದಶಕಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯವು ಕೈಗೊಂಡಿತು. ವೈಜ್ಞಾನಿಕ ರೀತಿಯಲ್ಲಿ ಶಾಸ್ತ್ರ ಶುದ್ಧವಾಗಿ ದಾಸಸಾಹಿತ್ಯವನ್ನು ಪ್ರಕಟಿಸುವುದರ ಅಡಿಗಲ್ಲನ್ನು ಹಾಕಿದ ಶ್ರೇಯಸ್ಸು ಆ ಮಾಲೆಯ ಸಂಪಾದಕರಾಗಿದ್ದ ಡಾ. ಜಿ. ವರದರಾಜರಾವ್ ಅವರಿಗೆ ಸಲ್ಲಬೇಕು. ಇದುವರೆಗೆ ಕೆಲವು ಸಂಪುಟಗಳು ಮಾತ್ರ ಬಂದಿವೆ. ಆದರೆ ಹಸ್ತಪ್ರತಿಗಳಲ್ಲಿ ವಿಪುಲ ದಾಸಸಾಹಿತ್ಯವನ್ನು ಸಂಗ್ರಹಿಸಲಾಗಿದೆ. ಅದೇ ರೀತಿಯಲ್ಲಿಲಿಂಗಸುಗೂರಿನಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಾಗೂ ತಿರುಪತಿಯ ದಾಸಸಾಹಿತ್ಯ ಪ್ರೊಜೆಕ್ಟದಲ್ಲಿ ಕೂಡ ವಿಪುಲ ಹಸ್ತಪ್ರತಿಗಳ ಸಂಗ್ರಹವಿದೆ. ಇವರೆಲ್ಲರ ಸಹಕಾರದಿಂದ ಈಗ ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯವನ್ನು ಒಂದೆಡೆ ಸಂಗ್ರಹಿಸಿ ಪ್ರಕಟಿಸುವ ಸಾಹಸದ ಕಾರ್ಯವನ್ನು ಮಾಡುತ್ತಿದೆ.

ಸಂಪುಟ ಯೋಜನೆ

ದಾಸಸಾಹಿತ್ಯದ ಪರಿಷ್ಕರಣ ಕಾರ್ಯ ತುಂಬ ಜಟಿಲವಾದುದೆಂಬುದು ಸಂಪಾದಕ ಮಂಡಳಿಯ ಪ್ರಥಮ ಸಭೆಯಲ್ಲಿಯೇ ಅನುಭವಕ್ಕೆ ಬಂದಿತು. ಕಳೆದ ಐದು ಶತಮಾನಗಳಿಂದ ನಿರಂತರ ಹರಿದು ಬಂದ ದಾಸಸಾಹಿತ್ಯ ರಚನೆಯಲ್ಲಿಯ ದಾಸರ ಹಾಗೂ ದಾಸರ ಪದಗಳ ಸಂಖ್ಯಾಬಾಹುಳ್ಯವನ್ನು ಗಮನಿಸಿ ಅದಕ್ಕೊಂದು ಕಾಲಮಿತಿಯನ್ನು ಹಾಕಿಕೊಳ್ಳುವುದು ಅನಿವಾರ್ಯವಾಯಿತು. ಹಾಗೆ ದಾಸಸಾಹಿತ್ಯದ ಪ್ರಾರಂಭಕಾಲದಿಂದ 19ನೆಯ ಶತಮಾನದ ಅಂತ್ಯದವರೆಗೆ ರಚಿತಗೊಂಡ ವೈದಿಕ ಪರಂಪರೆಯ ದಾಸರ ಪದಗಳನ್ನುಸಂಗ್ರಹಿಸುವುದೆಂದು, ಅದರಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಪರಂಪರೆಯ ಲಭ್ಯವಿದ್ದ ಹಾಡುಗಳನ್ನು 35ಸಂಪುಟಗಳಲ್ಲಿ ಪ್ರಕಟಿಸುವುದೆಂದು ನಿರ್ಧರಿಸಲಾಯಿತು.

ಈ 35 ಸಂಪುಟಗಳನ್ನು* ಸಂಪಾದಕ ಮಂಡಳಿಯ ಸದಸ್ಯರಲ್ಲದೆ ನಾಡಿನ ಹಲವಾರು ವಿದ್ವಾಂಸರನ್ನು ಸಂಪಾದಿಸಿ ಕೊಡಲು ಕೇಳಿಕೊಳ್ಳಲಾಯಿತು.

ಇಂಥದೊಂದು ಬೃಹತ್ ಕಾರ್ಯವನ್ನು ಕೈಗೊಂಡಾಗ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ. ಅನ್ಯ ಮತ-ಪಂಥಗಳ ಟೀಕೆಗಳು ಬಂದಿದ್ದರೆ ಅಂಥ ಹಾಡುಗಳನ್ನು ಕೈಬಿಡಬೇಕು. ಒಂದೇ ಹಾಡು ಇಬ್ಬರು ದಾಸರ ಅಂಕಿತದಲ್ಲಿ ಪ್ರಚಲಿತದಲ್ಲಿದ್ದರೆ, ಎರಡೂ ಕಡೆಗೆ ಅವುಗಳನ್ನು ಕೊಟ್ಟು ಕೆಳಗೆ ` ಈ ಕೀರ್ತನೆ . . . . ದಾಸರ ಅಂಕಿತದಲ್ಲೂ ಇದೆ' ಎಂದೂ ಸೂಚಿಸಬೇಕು. ದ್ವೈತ ಸಂಪ್ರದಾಯದ ಕೀರ್ತನೆಗಳನ್ನು ಪ್ರಕಟಿಸುವಾಗ ದೇವ-ಗುರು ತಾರತಮ್ಯವನ್ನು ಪಾಲಿಸಬೇಕು ; ಉಳಿದೆಡೆ ಗಣೇಶ ಪ್ರಾರ್ಥನೆ, ಭಗವಂತನ ನಾಮಸಂಕೀರ್ತನೆ, ಆತ್ಮನಿವೇದನೆ, ಲೋಕನೀತಿ, ತಾತ್ವಿಕ, ಕಥನಾತ್ಮಕ, ಸಂಪ್ರದಾಯ ಹಾಗೂ ವಿಶೇಷ ಹಾಡುಗಳೆಂದು ಮುಂತಾಗಿ ವಿಂಗಡಿಸಿ ಕೊಡಬೇಕು - ಎಂಬುದಾಗಿ ನಿರ್ಧರಿಸಿತು.

ಪ್ರತಿಯೊಂದು ಸಂಪುಟದ ಪ್ರಾರಂಭದಲ್ಲಿ ಹಾಡುಗಳ ಪರಿವಿಡಿಯನ್ನು ಕೊಟ್ಟು ಪ್ರಸ್ತಾವನೆಯಲ್ಲಿ ಆಯಾ ದಾಸರ ಸಂಕ್ಷಿಪ್ತ ಜೀವನ ಚರಿತ್ರೆ, ಕೃತಿಗಳ ಸಮೀಕ್ಷೆ, ಶೈಲಿ ಇತ್ಯಾದಿಗಳನ್ನು ವಿವರಿಸಿ, ಗ್ರಂಥಸಂಪಾದನೆಯ ಆಕರಗಳನ್ನೂ ಕೊಡಲು ಪ್ರಯತ್ನಿಸಲಾಗಿದೆ. ಕೊನೆಯಲ್ಲಿ ಬರುವ ಅನುಬಂಧಗಳಲ್ಲಿ ಕಠಿಣ ಶಬ್ದಗಳ ಅರ್ಥ, ಟಿಪ್ಪಣಿ ಮತ್ತು ವಿಶಿಷ್ಟ ಅಂಕಿತನಾಮಗಳ ಸೂಚಿ ಹಾಗೂ ಹಾಡುಗಳ ಅಕಾರಾದಿಯನ್ನು ಕೊಡಲಾಗಿದೆ.

ಈ ಸಂಪುಟಗಳು ಜನಪ್ರಿಯ ಆವೃತ್ತಿಗಳಾಗಿರುವುದರಿಂದ ಲಭ್ಯವಿರುವ ಪಾಠಾಂತರಗಳಲ್ಲಿ ಯೋಗ್ಯವಾದುದನ್ನು ಸ್ವೀಕರಿಸಿದೆ. ಅನ್ಯ ಪಾಠಗಳನ್ನು ಅಡಿಯಲ್ಲಿ ನಮೂದಿಸಿಲ್ಲ. ಆದರೂ ಇವು ವಿದ್ವಜ್ಜನಪ್ರಿಯ ಆವೃತ್ತಿಗಳೂ ಆಗಬೇಕೆಂಬ ರೀತಿಯಲ್ಲಿ ಈ ಸಂಪುಟಗಳನ್ನು ರೂಪಿಸಲು ಪ್ರಯತ್ನಿಸಿದ್ದೇವೆ.

ಕೃತಜ್ಞತೆಗಳು

ಕಳೆದ ನೂರೈವತ್ತು ವರ್ಷಗಳಿಂದ ಪಾಶ್ಚಾತ್ಯ ಮಿಶನರಿಗಳಿಂದ ಹಿಡಿದು ಈ ಮೊದಲು ಉಲ್ಲೇಖಿಸಿದ ನಾಡಿನ ಅನೇಕ ವಿದ್ವಜ್ಜನರು, ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ದಾಸಸಾಹಿತ್ಯ ಕುರಿತು ನಿರಂತರ ದುಡಿದು ವಿಪುಲ ಸಾಮಗ್ರಿಯನ್ನು ಪ್ರಕಟಿಸಿದ್ದಾರೆ. ಈ ಎಲ್ಲ ವ್ಯಕ್ತಿಗಳಿಗೂ ಸಂಘ ಸಂಸ್ಥೆಗಳಿಗೂ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು ಸಲ್ಲುತ್ತವೆ.

ಈ ಯೋಜನೆ ಅಸ್ತಿತ್ವಕ್ಕೆ ಬಂದುದೂ ಒಂದು ವಿಶಿಷ್ಟ ಸಂದರ್ಭದಲ್ಲಿ ಎಂಬುದನ್ನು ಇಲ್ಲಿ ನಮೂದಿಸಬೇಕು. ಕರ್ನಾಟಕ ಸರ್ಕಾರವು ನಾಡಿನ ಖ್ಯಾತ ಸಂಶೋಧಕರಾದ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಸಮಗ್ರ ವಚನಸಾಹಿತ್ಯವನ್ನು ಪ್ರಕಟಿಸಿತಷ್ಟೇ. ಅವರೇ `ದಾಸಸಾಹಿತ್ಯ' ಯೋಜನೆಯನ್ನು ರೂಪಿಸಿ ಶ್ರೀಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥರ ಮೂ¯ಕ ಯೋಜನೆಯತ್ತ ಸರ್ಕಾರದ ಗಮನ ಸೆಳೆದರು. ಇದನ್ನು ಅರಿತ ಅಂದಿನ ಮುಖ್ಯಮಂತ್ರಿಗಳೂ ಅನಂತರ ಭಾರತದ ಪ್ರಧಾನಮಂತ್ರಿಗಳೂ ಆಗಿದ್ದ ಸನ್ಮಾನ್ಯ ಶ್ರೀ ಹೆಚ್. ಡಿ. ದೇವೇಗೌಡರು ಮುಧೋಳದಲ್ಲಿ (1995) ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರವು ಸಮಗ್ರ ದಾಸಸಾಹಿತ್ಯವನ್ನು ಪ್ರಕಟಿಸಲು ಒಪ್ಪಿಕೊಂಡಿದೆ ಎಂದು ಘೋಷಿಸಿದರು. ಅದರಂತೆ ಸರ್ಕಾರವು ಒಂಬತ್ತು ಜನರ ಸಂಪಾದಕ ಮಂಡಳಿಯನ್ನು ರಚಿಸಿತು. ಅದರಲ್ಲಿ ಡಾ. ಶ್ರೀನಿವಾಸ ಹಾವನೂರ, ಡಾ. ಟಿ.ಎನ್. ನಾಗರತ್ನ ಮತ್ತು ಪ್ರೊ. ವಸಂತ ಕುಷ್ಟಗಿ ಅವರನ್ನು ಸಮಿತಿಯ ಕಾರ್ಯನಿರ್ವಾಹಕ ಸಂಪಾದಕರೆಂದು ನಿಯಮಿಸಿತು. ಜೊತೆಗೆ ಈ ಮೊದಲು ಇಂಥ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ ಅನುಭವಿ ಡಾ. ಎಂ. ಎಂ. ಕಲಬುರ್ಗಿ, ದಾಸಸಾಹಿತ್ಯದಲ್ಲಿ ನುರಿತ ವಿದ್ವಾಂಸರುಗಳಾದ ಪ್ರೊ. ಎಂ. ರಾಜಗೋಪಾಲಾಚಾರ್ಯ, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ಮಂದಾಕಿನಿ, ಪ್ರೊ. ಸುಧಾಕರ ಮತ್ತು ಡಾ. ಬಸವರಾಜ ಸಬರದ ಅವರನ್ನು ಸಂಪಾದಕ ಮಂಡಳಿಯ ಸದಸ್ಯರನ್ನಾಗಿ ನಿಯಮಿಸಿತು. ಅವರುಗಳ ನಿರಂತರ ಪರಿಶ್ರಮದ ಫಲವೇ ಈ ಸಮಗ್ರ ದಾಸಸಾಹಿತ್ಯದ ಪ್ರಕಟಣಾ ಕಾರ್ಯ. ಈ ಪ್ರಕಟಣಾ ಕಾರ್ಯದಲ್ಲಿ ಅವರುಗಳೊಂದಿಗೆ 35 ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ಸರ್ವಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ, ಡಾ. ಡಿ. ಆರ್. ಪಾಂಡುರಂಗ, ಡಾ. ಅನಂತಪದ್ಮನಾಭರಾವ್, ಪ್ರೊ. ಬಿ. ಆರ್. ಕುಲಕರ್ಣಿ, ಡಾ. ಕೆ.ಜಿ. ವೆಂಕಟೇಶ್, ಪ್ರೊ. ಜಿ. ಅಶ್ವತ್ಥನಾರಾಯಣ, ಡಾ. ಕೆ. ಗೋಕುಲನಾಥ, ಡಾ. ಕೆ. ಎಂ. ಕೃಷ್ಣರಾವ್, ಡಾ. ಹಣಮಂತ ತಾಸಗಾಂವಕರ್, ಶ್ರೀ ನಾ. ಗೀತಾಚಾರ್ಯ ಡಾ. ಸ್ವಾಮಿರಾವ್ ಕುಲಕರ್ಣಿ, ಶ್ರೀ ಎನ್. ಹನುಮನಗೌಡ, ಶ್ರೀ ಎ. ಎನ್. ಅನಂತಸ್ವಾಮಿರಾವ್, ಶ್ರೀ ನಾರಾಯಣಾಚಾರ್ಯ ಧೂಳಖೇಡ, ಪ್ರೊ. ಶಾಶ್ವತ ಸ್ವಾಮಿ ಮುಕ್ಕುಂದಿಮಠ, ಶ್ರೀ ಕೆ. ಎಸ್. ವೆಂಕಟೇಶ್ ಮತ್ತು ಶ್ರೀ ಎಚ್. ಎಸ್. ಶ್ರೀನಿವಾಸಮೂರ್ತಿ ಅವರುಗಳು ಹಾಗೂ ಶ್ರೀಮತಿಯರಾದ ನಳಿನಿ ವೆಂಕಟೇಶ್, ಮೀನಾರಾವ್, ಲೀಲಾವತಿ ಎಸ್. ರಾವ್, ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಡಾ. ಬಿ. ಆರ್. ಅಕ್ಕಮಹಾದೇವಿ, ಶೀಲಾದಾಸ್, ಡಾ. ರಮಾ ಕಲ್ಲೂರಕರ, ಡಾ. ಸೀತಾಗುಡೂರ ಕುಲಕರ್ಣಿ, ಹೆಚ್. ಎಸ್. ಪದ್ಮಾಮೂರ್ತಿ, ರುಕ್ಮಿಣಿ ಗಿರಿಮಾಜಿ ಅವರುಗಳು ತುಂಬ ಶ್ರಮವಹಿಸಿ ಸಂಪುಟಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅವರುಗಳಿಗೆ ಸಂಪಾದಕ ಮಂಡಳಿಯು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಈ ಮಧ್ಯೆ ಸಂಪಾದಕ ಸಮಿತಿಯ ಸದಸ್ಯರಲ್ಲೊಬ್ಬರಾದ ಪ್ರೊ. ಎಂ. ರಾಜಗೋಪಾಲಾಚಾರ್ಯರು ಮತ್ತು ಡಾ. ಮಂದಾಕಿನಿ ಹಾಗೂ ಸಂಪುಟ ಸಂಪಾದಕರಲ್ಲಿ ಒಬ್ಬರಾದ ಶ್ರೀ ಎಚ್. ಎಸ್. ಶ್ರೀನಿವಾಸಮೂರ್ತಿ ಅವರು ನಮ್ಮನ್ನು ಅಗಲಿದ್ದು ದುಃಖದ ವಿಷಯವಾಗಿದೆ.

ಆಯಾ ಕಾಲದಲ್ಲಿ ಈ ಯೋಜನೆಗೆ ಸಹಕರಿಸಿದ ಹಾಗೂ ಈ ಯೋಜನೆಯ ಪರಿಕಲ್ಪನೆ ಯಶಸ್ವಿಯಾಗಿ ಕಾರ್ಯಾನುಷ್ಠಾನಕ್ಕೆ ಬರುವ ದಿಸೆಯಲ್ಲಿ ಸಹಕರಿಸಿದ ಈ ಹಿಂದಿನ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ವಿಶೇಷವಾಗಿ ಇಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಶ್ರೀಮತಿ ಉಮಾಶ್ರೀ ಅವರಿಗೆ, ಇಲಾಖೆಯ ಹಿಂದಿನ ಕಾರ್ಯದರ್ಶಿಗಳಾದ ಶ್ರೀ ಚಂದ್ರಹಾಸ ಗುಪ್ತ ಮತ್ತು ಶ್ರೀ ಸಿ. ಎಸ್. ಕೇದಾರ್‍ಹಾಗೂ ಈಗಿನ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎನ್. ನಾಗಾಂಬಿಕಾದೇವಿ ಅವರಿಗೆ ನಮ್ಮ ನಮನಗಳು ಸಲ್ಲುತ್ತವೆ. ಈ ಕಾರ್ಯದಲ್ಲಿ ಈ ಯೋಜನೆಗೆ ನೆರವಾದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಹಿಂದಿನ ನಿರ್ದೇಶಕರುಗಳು ಹಾಗೂ ಈಗಿನ ನಿರ್ದೇಶಕರಾದ ಶ್ರೀ ಕೆ. ಎ. ದಯಾನಂದ, ಅವರಿಗೆ ನಮ್ಮ ವಂದನೆಗಳು ಸಲ್ಲುತ್ತವೆ. ಈಕಾರ್ಯದಲ್ಲಿ ನೆರವಾದ ಬ್ಲೂಮ್ ಕನ್ಸಲ್ಟಿಂಗ್ ಸರ್ವೀಸಸ್ ಸಂಸ್ಥೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ, ವಿಶೇಷವಾಗಿ ಶ್ರೀ ಶಿವಕುಮಾರ ವೈದ್ಯಮಠ - ಸಿಇಓ ಅವರಿಗೆ ನಮ್ಮ ವಂದನೆಗಳು ಸಲ್ಲುತ್ತವೆ. ಇದು ಒಂದು ದೊಡ್ಡ ಯೋಜನೆ. ಇದರ ಸಂಪಾದನೆಯ ಸಮಸ್ಯೆಗಳು ದೊಡ್ಡವು. ಪಾಠಾಂತರ, ರೂಪಾಂತರ, ಪ್ರಕ್ಷಿಪ್ತತೆ ಇತ್ಯಾದಿಗಳ ಗೊಂದಲಕ್ಕೆ ಗುರಿಯಾಗುತ್ತ ಬಂದ ವ್ಯಾಪಕ ಪ್ರಮಾಣದ ಈ ದಾಸಸಾಹಿತ್ಯವನ್ನು ಒಂದೆಡೆ ಸಂಗ್ರಹಿಸುವುದು, ಪುನರುಕ್ತಿಗಳನ್ನು ಗುರುತಿಸುವುದು, ಅಂಕಿತ ಪಲ್ಲಟಗಳನ್ನು ಸರಿಪಡಿಸುವುದು, ಪ್ರಕ್ಷಿಪ್ತಗಳನ್ನು ದೂರೀಕರಿಸುವುದು, ಕೊನೆಯದಾಗಿ ಕೀರ್ತನೆಗಳನ್ನು ಶುದ್ಧೀಕರಿಸುವುದು ಎಂಥವರನ್ನೂ ಧೈರ್ಯಗೆಡಿಸುವ ಕೆಲಸ. ಹೀಗಿದ್ದೂ ದಾಸಸಾಹಿತ್ಯದ ಮೇಲಿನ ಗೌರವ ಪ್ರೀತಿಗಳು ನಮ್ಮಿಂದ ಈ ಕೆಲಸ ಮಾಡಿಸಿದೆ. ನಮ್ಮ ಶಕ್ತಿಗೆ ಮೀರಿ ಉಳಿದಿರಬಹುದಾದ ದೋಷಗಳನ್ನು ಮನ್ನಿಸಬೇಕೆಂದು ಕೋರುತ್ತೇವೆ. ಈ ಮೂವತ್ತೈದು ಸಂಪುಟಗಳನ್ನು ಸಹೃದಯ ಲೋಕಕ್ಕೆ ಅರ್ಪಿಸುತ್ತೇವೆ. ಸಮಗ್ರ ದಾಸಸಾಹಿತ್ಯವು ಸುಲಭ ಬೆಲೆಯಲ್ಲಿ ಕನ್ನಡಿಗರ ಮನೆ-ಮನಗಳಲ್ಲಿ ಬೆಳಗಲೆಂದು ಹಾರೈಸುತ್ತೇವೆ.


ಸಂಪಾದಕ ಮಂಡಳಿ
 
 
 
 

        Copyright | Disclaimer | Privacy Policy | Contact us                     

Powered by Bloom Consulting Services.