Home Page
 

ಯೋಜನೆಯನ್ನು ಕುರಿತು

ಕನ್ನಡ ಸಾಹಿತ್ಯ ಚರಿತ್ರೆಯ ಸಿರಿವಂತಿಕೆಯಲ್ಲಿ ಕೀರ್ತನ ಸಾಹಿತ್ಯದ ಕೊಡುಗೆ ವಿಪುಲವಾದುದು; ಆದರೆ, ಈ ನಿಟ್ಟಿನಲ್ಲಿ ಸಮಗ್ರ ಸಾಹಿತ್ಯದ ಸಂಗ್ರಹ ಮತ್ತು ಪ್ರಕಾಶನದ ಕಾರ್ಯ ಪೂರ್ಣವಾಗಿ ಆಗಿರಲಿಲ್ಲ. ಇದನ್ನು ಮನಗಂಡ ಸರ್ಕಾರವು ಸಮಗ್ರ ಸಾಹಿತ್ಯ ಪ್ರಕಟಣೆಯ ಕಾರ್ಯವನ್ನು ಕೈಗೆತ್ತಿಕೊಂಡು ಮುಂದುವರಿದಾಗ, ಸುಮಾರು ಒಂದು ನೂರ ಮೂವತ್ತೊಂಬತ್ತು ದಾಸರ, ಸುಮಾರು ಹದಿನಾರು ಸಾವಿರ ಕೀರ್ತನೆಗಳ ಬೃಹತ್ ಸಾಹಿತ್ಯ ಸಾಮಗ್ರಿ ದೊರಕಿವೆ. ಹೀಗೆ ಸಾಂಪ್ರದಾಯಿಕ ರೀತಿಯಲ್ಲಿ ಸಂಗ್ರಹಿಸಿ, ಸಂಪಾದಿಸಿದ ಕೀರ್ತನಾ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಮುದ್ರಿಸುವುದು ಬಹು ಸುಲಭವಾದ ಮಾರ್ಗ. ಆದರೆ, ಪ್ರಸ್ತುತ ಸಮಯ ಜನರನ್ನೆಲ್ಲಾ ಆಯಸ್ಕಾಂತದಂತೆ ತನ್ನೆಡೆ ಸೆಳೆಯುತ್ತಿರುವ ಮಾಹಿತಿ ತಂತ್ರ್ಞನದ ಕಾಲ. ಆದುದರಿಂದ ಈ ಸಂದರ್ಭಕ್ಕೆ ಅನುಗುಣವಾಗಿ ಬಹು ಉಪಯುಕ್ತವಾಗಿ, ಬಹುಮಾಧ್ಯಮದಲ್ಲಿ, ಜನಸಾಮಾನ್ಯರಿಗೆ ತಲುಪುವ ರೀತಿಯಲ್ಲಿ ಕೀರ್ತನಾ ಸಾಹಿತ್ಯವನ್ನು ಹೊರತರಬೇಕೆಂಬ ಕಲ್ಪನೆಯೇ ರೋಮಾಂಚನಕರವಾದ ವಿಷಯ. ಈ ಕಾರ್ಯವನ್ನು ಕೃತಿ ರೂಪಕ್ಕಿಳಿಸುವ ಹಾದಿಯಲ್ಲಿ ಎದುರಾದ ತಾಂತ್ರಿಕ ಸವಾಲುಗಳು ಬಹು ಕ್ಲಿಷ್ಟಕರವಾಗಿಯೇ ಕಂಡಿತು.

ಈ ಸಮಗ್ರ ಸಾಹಿತ್ಯವನ್ನು ಕೇವಲ ಮುದ್ರಣದಲ್ಲಷ್ಟೇ ಅಲ್ಲ ಆಯ್ದ ಕೀರ್ತನೆಗಳನ್ನು ಗಾಯನಕ್ಕೆ ಅಳವಡಿಸಿ, ಸಿಡಿ ಮತ್ತು ಅಂತರ್ಜಾಲದಲ್ಲಿ ಹೊರತರಬೇಕೆಂದಾಗ ಬಳಕೆದಾರರ ಆವಶ್ಯಕತೆಯನ್ನು ಆಧರಿಸಿ ತಯಾರಿಸುವ ಅಗತ್ಯವಿತ್ತು. ಆದರೆ ಇವುಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸರ್ಚ್ ಎಂಜಿನ್ (ಹುಡುಕುವಿಕೆ) ಇಲ್ಲದಿರುವುದು ಒಂದು ತಾಂತ್ರಿಕ ಸಮಸ್ಯೆಯೇ ಆಯಿತು. ಈ ರೀತಿಯ ಪ್ರಯತ್ನ ಕನ್ನಡ ಭಾಷೆಯಲ್ಲಿ ಹಿಂದೆಂದೂ ಆಗದಿದ್ದರಿಂದ ತಂತ್ರಾಂಶವನ್ನು ಹೊಸದಾಗಿಯೇ ಅಭಿವೃದ್ಧಿಪಡಿಸಬೇಕಾದ ಸವಾಲನ್ನು ಕೈಗೆತ್ತಿಕೊಂಡು, ಈ ನಿಟ್ಟಿನಲ್ಲಿ ಕನ್ನಡ ಗಣಕ ಪರಿಷತ್ತು, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ)-ಮಾಹಿತಿ ಮತ್ತು ತಂತ್ರ್ಞನ ಇಲಾಖೆ, ಮಹಾಭಾರತ ಸಂಶೋಧನಾ ಪ್ರತಿಷ್ಠಾನ, ವಿಷುಯಲ್ ಆಟ್ರ್ಸ ಮುಂತಾದ ಹಲವಾರು ಖಾಸಗಿ ತಂತ್ರಾಂಶಗಳ ಕಂಪನಿಯವರೊಂದಿಗೆ ನಿರಂತರ ಸಮಾಲೋಚನೆ, ಚಿಂತನೆಗಳನ್ನು ನಡೆಸಲಾಯಿತು..

ಹೀಗೆ ಸಾಹಿತ್ಯ ಸಂಗ್ರಹ, ಸಂಪಾದನೆ, ಸಂಗೀತ ಸಂಯೋಜನೆ, ಧ್ವನಿಮುದ್ರಣ, ಬಹುಮಾಧ್ಯಮಕ್ಕೆ ಅಳವಡಿಸುವ ತಾಂತ್ರಿಕ ಕುಶಲತೆಯ ನಿರಂತರ ಕಾರ್ಯಾನುಷ್ಠಾನಕ್ಕೆ ಸಂಪಾದಕ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಸಂಪುಟ ಸಂಪಾದಕ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯದ ಅಧಿಕಾರಿಗಳು, ಎಂ.ಎಸ್.ಐ.ಎಲ್.ನ ಅಧಿಕಾರಿಗಳು, ತಂತ್ರಜ್ಞರು, ಕೋರ್ ಸಮಿತಿ ಸದಸ್ಯರು, ಸಂಗೀತ ನಿರ್ದೇಶಕರು, ಗಾಯಕರು ಹಾಗು ಮುಖ್ಯವಾಗಿ ಈ ಯೋಜನೆಯ ರೂವಾರಿಯಾದ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಹಿಂದಿನ ಕಾರ್ಯದರ್ಶಿಯವರು, ಇವೆರೆಲ್ಲರ ಪರಿಶ್ರಮ ಅಗಾಧವಾಗಿ ದೊರಕಿದೆ. ಈ ಪರಿಶ್ರಮದ ಫಲವಾಗಿ ಬಹುಮಾಧ್ಯಮದಲ್ಲಿ ಸಮಗ್ರ ದಾಸಸಾಹಿತ್ಯ ಯೋಜನೆಯ ಬೃಹತ್ ಕಾರ್ಯ ಸಾಕಾರವಾಗಿ ರೂಪುಗೊಂಡಿದೆ.

ಈ ವಿಪುಲ ಸಾಹಿತ್ಯವನ್ನು ಕನ್ನಡ ಬಲ್ಲವರು, ಕನ್ನಡಾಭಿಮಾನಿಗಳು ಪುಸ್ತಕ ರೂಪದಲ್ಲಿಯೂ, ಬಹುಗಾತ್ರದ ಸಾಹಿತ್ಯವನ್ನು ಕೈ ಅಳತೆಯ ಸಿ.ಡಿ. ರೂಪದಲ್ಲಿಯೂ ಈಗ ಪಡೆಯಬಹುದಾಗಿದೆ. ಅಲ್ಲದೆ, ಅಂತರ್ಜಾಲದ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿರುವ ಆಸಕ್ತ ಜನತೆಯಷ್ಟೇ ಅಲ್ಲದೇ, ಕನ್ನಡ ಬಾರದ ಇತೆರ ಭಾಷಿಗರೂ ಸಹಾ ಕುಳಿತಲ್ಲಿಯೇ ಆರಾಮವಾಗಿ ವೀಕ್ಷಿಸುವ, ಆಸ್ವಾದಿಸುವ ಅವಕಾಶವನ್ನು ಏಕಕಾಲದಲ್ಲಿಯೇ ಕಲ್ಪಿಸಲಾಗಿದೆ. ಪ್ರಕಾಶನದ ಇತಿಹಾಸದಲ್ಲಿಯೇ ಅವಿಸ್ಮರಣೀಯವಾದ ಈ ಕಾರ್ಯವು ಮುಂದೆ, ಸರ್ಕಾರಿ ಸಂಸ್ಥೆಗಳಿಗಾಗಲಿ ಅಥವಾ ಯಾವುದೇ ಖಾಸಗಿ ಪ್ರಕಾಶನ ಸಂಸ್ಥೆಗಾಗಲಿ ಮಾದರಿಯಾಗುವುದರಲ್ಲಿ ಸಂದೇಹವಿಲ್ಲ.

ನಮ್ಮ ಸಂಸ್ಕತಿಯನ್ನು ಬಿತ್ತರಿಸಲು ನಾಲ್ಕು ಗೋಡೆಯೊಳಗಿರುವ ರಂಗಮಂದಿರಗಳ, ವೇದಿಕೆಗಳ ಅಗತ್ಯವಷ್ಟೇ ಸಾಲದು, ಭವಿತವ್ಯದಲ್ಲಿ ವಿಶ್ವದ ಜನರನ್ನು ತಲಪಲು ಮತ್ತು ಮುಖ್ಯವಾಗಿ ಯುವಜನಾಂಗಕ್ಕೆ ನಮ್ಮ ಸಾಂಸ್ಕತಿಕ ಕ್ಷಿತಿಜದ ವಿಸ್ತಾರವನ್ನು ಪರಿಚಯಿಸಲು ಸೂಕ್ಷ್ಮ ಸಂವೇದನಾಶೀಲವಾದ ಸಾಹಿತ್ಯವನ್ನು ಬಹುಮಾಧ್ಯಮದಲ್ಲಿ ಅಳವಡಿಸುವುದು ಅತ್ಯಾವಶ್ಯಕ. ಈ ದಿಸೆಯಲ್ಲಿ ಇದೊಂದು ವಿನೂತನ ಪ್ರಯೋಗ; ಈ ಪ್ರಯೋಗದ ಫಲ ಎಲ್ಲರಿಗೂ ಲಭ್ಯವಾಗಲೆಂಬುದು ನನ್ನ ಆಶಯ.

ಡಾ. ಎನ್. ನಾಗಾಂಬಿಕಾದೇವಿ
ಪ್ರಧಾನ ಕಾರ್ಯದರ್ಶಿಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬೆಂಗಳೂರು
 
 
 
 

        Copyright | Disclaimer | Privacy Policy | Contact us                     

Powered by Bloom Consulting Services.