Home Page
 

ಪ್ರಕಾಶಕರ ಮಾತು


ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಹರಿದಾಸರ ಸ್ಥಾನ ವಿಶಿಷ್ಟವಾದದ್ದು. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಅವಿರತವಾಗಿ ಹರಿದುಬಂದ ಜೀವನಮೌಲ್ಯಗಳನ್ನು ಜನಸಾಮಾನ್ಯರ ಆಡುಭಾಷೆಯಲ್ಲಿ ಮುಟ್ಟಿಸಿ, ಲೌಕಿಕ ವಿಡಂಬನೆಯ ಮೂಲಕ ಅವರ ಮಾನಸಿಕ ವಿಕಾಸವನ್ನು ಯಶಸ್ವಿಯಾಗಿ ಸಾಧಿಸಿದವರು ಹರಿದಾಸರು. ಪಾಂಡಿತ್ಯ, ಲೋಕಾನುಭವಗಳ ಹಿನ್ನೆಲೆಯಿಂದಾಗಿ, ಆಡುಭಾಷೆಯ ಸೊಗಡಿನಿಂದಾಗಿ ಇವರು ಹಾಡಿದ್ದೆಲ್ಲ ಸಾಹಿತ್ಯವಾಯಿತು, ಕಾವ್ಯವಾಯಿತು, ಕೇಳುಗರನ್ನು ಸೆರೆಹಿಡಿಯಿತು. ಗೇಯಗುಣವುಳ್ಳ, ನೃತ್ಯಕ್ಕೆ ಅಳವಡುವ, ಛಂದೋಬದ್ಧವಾದ, ಜನತೆಯ ಮಧ್ಯದಲ್ಲಿಯೇ ಸಂದರ್ಭಾನುಸಾರ ಹುಟ್ಟಿದ ಹರಿದಾಸಸಾಹಿತ್ಯ ವೈಶಿಷ್ಟ್ಯಪೂರ್ಣವೆನಿಸಿತು. ಕನ್ನಡ ವಾಙ್ಮಯದಲ್ಲಿ ದಾಸಸಾಹಿತ್ಯ ಒಂದು ವಿಶೇಷ ಸ್ಥಾನ ಪಡೆಯಿತು. ಹೀಗೆ ಸಾಹಿತ್ಯ, ಸಂಗೀತ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದಾಸಸಾಹಿತ್ಯದ ಕೊಡುಗೆ ಗಣನೀಯವಾದುದು.

ಸುಮಾರು ನೂರಮೂವತ್ತೊಂಬತ್ತು ಜನ ದಾಸರು ಆಗಿಹೋಗಿದ್ದು, ಅವರ ಕೀರ್ತನೆಗಳ ಸಂಖ್ಯೆ ಸುಮಾರು ಹದಿನಾರು ಸಾವಿರಕ್ಕೂ ಅಧಿಕ. ಈವರೆಗೆ ಕೆಲವು ದಾಸರ ಕೀರ್ತನೆಗಳು ಬಿಡಿ ಬಿಡಿಯಾಗಿ ಪ್ರಕಟವಾಗಿವೆಯಾದರೂ, ಇನ್ನೂ ಅನೇಕ ದಾಸವರೇಣ್ಯರ ಕೀರ್ತನೆಗಳು ಹಸ್ತಪ್ರತಿ ರೂಪದಲ್ಲಿಯೇ ಉಳಿದುಕೊಂಡಿವೆ. ಅವುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸಿ, ಸಮಗ್ರ ದಾಸಸಾಹಿತ್ಯವು ಕನ್ನಡಿಗರಿಗೆ ಒಂದೆಡೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಸಮಗ್ರ ದಾಸಸಾಹಿತ್ಯ ಪ್ರಕಟಣೆಯ ಬೃಹತ್ ಯೋಜನೆಯನ್ನು ಹಾಕಿಕೊಂಡಿದೆ. ಈ ಉದ್ದೇಶಕ್ಕಾಗಿ ಕಾರ್ಯನಿರ್ವಾಹಕ ಸಂಪಾದಕರಾದ ಡಾ. ಶ್ರೀನಿವಾಸ ಹಾವನೂರ,ಡಾ. ಟಿ.ಎನ್.ನಾಗರತ್ನ, ಪ್ರೊ. ವಸಂತಕುಷ್ಟಗಿ, ಸದಸ್ಯರಾದ ಡಾ.ಎಂ.ಎಂ.ಕಲಬುರ್ಗಿ, ಡಾ. ಬಸವರಾಜ ಸಬರದ, ಪ್ರೊ. ಸುಧಾಕರ, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ಮಂದಾಕಿನಿ (ಈಗದಿವಂಗತರು) ಹಾಗೂ ಪ್ರೊ. ಎಂ. ರಾಜಗೋಪಾಲಾಚಾರ್ಯ (ಈಗ ದಿವಂಗತರು) ಅವರನ್ನೊಳಗೊಂಡಂತೆ ಸಂಪಾದಕ ಸಮಿತಿಯನ್ನು ರಚಿಸಲಾಯಿತು. ಇಲಾಖಾ ನಿರ್ದೇಶಕರು ಸಮಿತಿಯ ಸದಸ್ಯ-ಕಾರ್ಯದರ್ಶಿಗಳಾಗಿರುತ್ತಾರೆ. ಇದರಲ್ಲಿ ನಾಡಿನ ಅನೇಕ ವಿದ್ವಾಂಸರ ನೆರವನ್ನು ಬಳಸಿಕೊಳ್ಳಲಾಗುತ್ತಿದೆ.

ಈ ಯೋಜನೆಯನ್ವಯ ‘ಸಮಗ್ರ’ವಾಗಿ ದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಪ್ರಕಟಿಸುವುದಿದ್ದರೂ ಕೆಲವು ಹರಿದಾಸರ ರಚನೆಗಳು ಬಿಟ್ಟು ಹೋಗಿರುವ ಸಾಧ್ಯತೆ ಇರುತ್ತದೆ. ಅಂಥ ಹರಿದಾಸರ ಕೀರ್ತನೆಗಳು ದೊರೆತಲ್ಲಿ ಮುಂದೆ ಪರಿಷ್ಕರಣ ಸಂದರ್ಭದಲ್ಲಿ ಪ್ರಕಟಿಸಲು ಕ್ರಮಕೈಗೊಳ್ಳಲಾಗುವುದು.

ಸಮಗ್ರ ದಾಸಸಾಹಿತ್ಯ ಯೋಜನೆಯಡಿ ಪ್ರಕಟವಾಗುತ್ತಿರುವ ಆಯಾ ಸಂಪುಟಗಳ ಸಂಪಾದಕರಿಗೆ ಹಾಗೂ ಈ ಕಾರ್ಯದಲ್ಲಿ ನಮ್ಮೊಡನೆ ಸಹಕರಿಸಿದ ಸಂಪಾದಕ ಮಂಡಳಿಯವರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಹಿಂದಿನ ನಿರ್ದೇಶಕರಾದ ಶ್ರೀ ಕೆ.ಸಿ.ರಾಮಮೂರ್ತಿ, ಶ್ರೀ ಸಿ.ಸೋಮಶೇಖರ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಕಾ.ತ.ಚಿಕ್ಕಣ್ಣ ಅವರಿಗೆ, ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ ಹಾಗೂ ಡಾ. ಮಂಜುಳ ಅವರಿಗೆ ಕೃತಜ್ಞತೆಗಳು.

ಹರಿದಾಸರ ಕೀರ್ತನೆಗಳನ್ನು ಆಯ್ದು ಸಂಗೀತಕ್ಕೆ ಆಯ್ಕೆ ಮಾಡಲು ನೆರವಾದ ಶ್ರೀ ವಿನಾಯಕ ತೊರವಿ, ಶ್ರೀ ಮೈಸೂರು ವಿ. ಸುಬ್ರಹ್ಮಣ್ಯ, ಶ್ರೀ ಆರ್. ಕೆ. ಪದ್ಮನಾಭ, ಶ್ರೀ ಬಾನಂದೂರು ಕೆಂಪಯ್ಯ ಹಾಗು ಶ್ರೀಮತಿ ಮಾಲತಿ ಶರ್ಮರವರಿಗೆ, ಮತ್ತು ಈ ಯೋಜನೆಯಲ್ಲಿ ಪಾಲ್ಗೊಂಡ ಎಲ್ಲ ಸಂಗೀತ ನಿರ್ದೇಶಕರಿಗೆ ಹಾಗೂ ಗಾಯಕರಿಗೆ ಕೃತಜ್ಞತೆಗಳು.

ಸಂಪುಟಗಳನ್ನು ಮುದ್ರಣಕ್ಕೆ ಅನುಗೊಳಿಸುವ ಕಾರ್ಯ ನಿರ್ವಹಿಸಿದ ಪ್ರೊ.ಜಿ.ಅಶ್ವತ್ಥನಾರಾಯಣ,ಡಾ.ಅನಂತ ಪದ್ಮನಾಭರಾವ್ ಮತ್ತು ಪ್ರೊ.ನಾಗೀತಾಚಾರ್ಯ ಇವರಿಗೂ ಸಹ ಕೃತಜ್ಞತೆಗಳು.

ಈ ಸಮಗ್ರ ದಾಸಸಾಹಿತ್ಯ ಸಂಪುಟಗಳ ಮುದ್ರಣ ಕಾರ್ಯವನ್ನು ನಿರ್ವಹಿಸಿದ ಎಂ.ಎಸ್.ಐ.ಎಲ್. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಶೋಕ್ ವಿ. ಡೇವಿಡ್ ಹಾಗೂ ವಿಶೇಷಾಧಿಕಾರಿಗಳಾದ ಶ್ರೀ ಎಂ. ರವಿಶಂಕರ್ ಅವರಿಗೆ ನನ್ನ ಕೃತಜ್ಞತೆಗಳು. ಈ ಸಮಗ್ರ ದಾಸ ಸಾಹಿತ್ಯದ ಸಂಪುಟಗಳನ್ನು ಇಂಟರ್ನೆಟ್ ಮೂಲಕ ಎಲ್ಲರಿಗೂ ತಲುಪುವಂತೆ ಮಾಡಿದ ಬ್ಲೂಮ್ ಕನ್ಸಲ್ಟಿಂಗ್ ಸರ್ವೀಸಸ್ ಸಂಸ್ಥೆಯ ಸಿಇಓ ಆದ ಶಿವಕುಮಾರ ವೈದ್ಯಮಠ ಅವರಿಗೆ ನನ್ನ ಕೃತಜ್ಞತೆಗಳು.

ಸಮಗ್ರ ದಾಸಸಾಹಿತ್ಯವನ್ನು ಪ್ರಕಟಿಸುವುದು ಹರಿದಾಸರಿಗೂ ಕನ್ನಡ ಜನತೆಗೂ ನಾವು ಸಲ್ಲಿಸಬೇಕಾದ ಸೇವೆಯೆಂದು ಭಾವಿಸಿದ್ದೇನೆ.

ಪಂಡಿತ-ಪಾಮರರನ್ನು ಏಕಕಾಲಕ್ಕೆ ಆಕರ್ಷಿಸಬಲ್ಲ ವಿಶಿಷ್ಟ ಸಾಮಥ್ರ್ಯ ದಾಸಸಾಹಿತ್ಯದ್ದು ಎಂದರೆ ತಪ್ಪಾಗಲಾರದು.

ಕನ್ನಡ ಜನತೆಯು ಈ ಪ್ರಕಟಣೆಯ ಸದುಪಯೋಗ ಪಡೆದುಕೊಂಡೀತು ಎಂದು ಆಶಿಸಿದ್ದೇನೆ.ಶ್ರೀ ಕೆ. ಎ. ದಯಾನಂದ
ಮಾನ್ಯ ನಿರ್ದೇಶಕರು
 
 
 
 

        Copyright | Disclaimer | Privacy Policy | Contact us                     

Powered by Bloom Consulting Services.