Home Page
 

ಎರಡು ಮಾತು


ಕನ್ನಡ ಸಾಹಿತ್ಯದ ತವನಿಧಿಗಳಲ್ಲಿ ದಾಸಸಾಹಿತ್ಯವೂ ಒಂದು. ಕರ್ನಾಟಕದ ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ಪ್ರಭಾವಪೂರ್ಣವಾಗಿ ಸಮೃದ್ಧಿಗೊಳಿಸಿದವರು ಹರಿದಾಸರು. ಬದುಕಿನಲ್ಲಿ ನಿಷ್ಠೆ, ಸಾಹಿತ್ಯದಲ್ಲಿ ಬದುಕಿನ ತತ್ತ್ವಗಳನ್ನು ಅಡಗಿಸಿ ಜನಸಾಮಾನ್ಯರನ್ನು ಉನ್ನತ ಜೀವನದತ್ತ ಉದ್ದೀಪಿಸುವ ಮಹಾಕಾಯಕದಲ್ಲಿ ತೊಡಗಿದವರು ಹರಿದಾಸರು. ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯಾಗಿರುವ ಹರಿದಾಸ ಸಾಹಿತ್ಯ ಸಮಾಜದ ಮೌಢ್ಯವನ್ನು ಬಯಲಿಗೆಳೆದು, ಜಾತಿ, ಮತ, ಪಂಥಗಳನ್ನು ಮೀರಿ ನಿಂತ ಮಾನವೀಯ ಮೌಲ್ಯಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿತು.

ಹರಿದಾಸ ಸಾಹಿತ್ಯಕ್ಕೆ ಪ್ರೇರಣೆ ಭಕ್ತಿಯೇ ಆದರೂ, ಕರ್ನಾಟಕ ಸಂಗೀತಕ್ಕೆ ಸಮೃದ್ಧಿಯನ್ನು ನೀಡಿದವರು ಹರಿದಾಸರು. ಗ್ರಾಮ್ಯ ಮತ್ತು ದೇಶ್ಯ ಶಬ್ದಗಳಿಗೆ ಸಾಹಿತ್ಯದ ಮುದ್ರೆಯನ್ನು ಒತ್ತಿ, ಭಾಷೆಗೊಂದು ಪರಿಪಕ್ವತೆಯನ್ನೂ ತಂದುಕೊಟ್ಟರು. ಇಂಥ ಸಾಹಿತ್ಯ ಸಂಪತ್ತನ್ನು ರಕ್ಷಿಸುವುದು ಮತ್ತು ಪ್ರಸಾರ ಮಾಡುವುದು ನಮ್ಮ ಕರ್ತವ್ಯ. ಈ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯ ಪ್ರಕಟಣ ಯೋಜನೆಗೆ ಸಮಿತಿಯೊಂದನ್ನು ರಚಿಸಿದ್ದು, ಇದರಲ್ಲಿ ನಾಡಿನ ಅನೇಕ ವಿದ್ವಾಂಸರು ಸಂಪುಟ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಪುಟಗಳು ಹೊರಬರಲು ಕಾರಣರಾದ ಸಂಪಾದಕ ಮಂಡಳಿಯ ಸದಸ್ಯರಿಗೆ ಹಾಗೂ ಈ ಸಂಪುಟದ ಸಂಪಾದಕರಿಗೆ ನನ್ನ ಕೃತಜ್ಞತೆಗಳು.

ದಾಸರು ತಮ್ಮ ಸಾಹಿತ್ಯದಲ್ಲಿ ಸಾರ್ವಕಾಲಿಕ ಮೌಲ್ಯಗಳನ್ನು ಉಳಿಸಿ ಹೋಗಿದ್ದಾರೆ. ನಮ್ಮ ಸಾಮಾಜಿಕ ಜೀವನವನ್ನು ರೂಪಿಸುವಲ್ಲಿ ಈ ಕೀರ್ತನೆಗಳು ಮೌಲಿಕವಾದುವು. ಕನ್ನಡ ಜನತೆ ಈ ಕೃತಿಯ ಪ್ರಯೋಜನವನ್ನು ಪಡೆದರೆ ಪಟ್ಟ ಶ್ರಮ ಸಾರ್ಥಕವಾಗುತ್ತದೆ.


ಶ್ರೀಮತಿ ಉಮಾಶ್ರೀ
ಮಾನ್ಯ ಸಚಿವರು
 
 
 
 

        Copyright | Disclaimer | Privacy Policy | Contact us                     

Powered by Bloom Consulting Services.