Home Page
 

ಮುನ್ನುಡಿ

ಹರಿದಾಸ ಸಾಹಿತ್ಯ ಕನ್ನಡ ಸಂಸ್ಕೃತಿ ಪರಂಪರೆಯ ಮಹತ್ವಪೂರ್ಣ ಭಾಗವಾಗಿದೆ. ದೇಶೀಯತೆ ಹಾಗೂ ಗೇಯತೆಗಳೆರಡನ್ನೂ ಮೇಳವಿಸಿಕೊಂಡು, ಕನ್ನಡ ಸಾಹಿತ್ಯವಾಹಿನಿಗೆ ಇದು ಹೊಸತನವನ್ನು ನೀಡಿದೆ. ಮನುಜಮತ,

ಸಾಹಿತ್ಯಪಥ ಹಾಗೂ ಭಕ್ತಿಸಿದ್ಧಾಂತದ ತ್ರಿವೇಣಿಯಾಗಿರುವ ಈ ಪ್ರಜಾಸಾಹಿತ್ಯವನ್ನು ಪ್ರಜೆಗಳಿಗೆ ಮುಟ್ಟಿಸುವುದು ಪ್ರಜಾಸತ್ತಾತ್ಮಕ ಸರಕಾರದ ಆದ್ಯ ಕರ್ತವ್ಯವಾಗಿದೆ.

ಕನ್ನಡ ಭಾಷಿಕಶಕ್ತಿಯ ವಿವಿಧ ಆಯಾಮಗಳನ್ನು ಸೆಳೆದು ತೋರಿರುವ, ಸಾಹಿತ್ಯ-ಸಂಗೀತಗಳ ಸಾಮರಸ್ಯವನ್ನು ಮೆರೆದಿರುವ ಈ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಹತ್ವವನ್ನು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಮಾನವಾನುಕಂಪ, ಸಮಾಜಸುಧಾರಣೆ, ಲೋಕದ ಡೊಂಕುಗಳನ್ನು ನಗೆ ವಿಡಂಬನೆಗಳ ಮೂಲಕ ತಿದ್ದುವ ಕೌಶಲ ದಾಸಸಾಹಿತ್ಯದ ಪ್ರಮುಖ ಲಕ್ಷಣವಾಗಿದೆ.

ಆಧ್ಯಾತ್ಮಿಕ ಸಾಧನೆ, ಅನುಭವ - ಅನುಭಾವಗಳು ದಾಸಸಾಹಿತ್ಯದ ಪ್ರಮುಖ ಅಂಶವಾದರೂ, ಸುತ್ತಮುತ್ತಲಿರುವ ಜೀವನದ ಕಡೆಗೆ, ಮಾನವ ಸ್ವಭಾವದ ಕಡೆಗೆ ಕಣ್ಣು ಹರಿಸಿದ ಹರಿದಾಸರು ಸಾತ್ತ್ವಿಕ ಜೀವನ ನಿರ್ವಹಣೆಗೆ, ಮಾನವನ ಮೇಲ್ಮೆಗೆ, ನೈತಿಕ ಆಚರಣೆಗೆ ಒತ್ತು ನೀಡಿದವರು.

ಹರಿದಾಸ ಸಾಹಿತ್ಯ ಅಪಾರವಾದುದು ಹಾಗೂ ವೈವಿಧ್ಯವಾದುದು. ಈ ವಿಪುಲ ಸಾಹಿತ್ಯರಾಶಿಯನ್ನು ಒಂದೆಡೆ ಕ್ರೋಡೀಕರಿಸಿ, ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯವನ್ನು ಕನ್ನಡ ಜನತೆಗೆ ನೀಡುತ್ತಿದೆ.

ಈ ಯೋಜನೆಗೆ ದುಡಿದ ಸಂಪಾದಕ ಮಂಡಳಿಯ ಶ್ರದ್ಧೆ ಹಾಗೂ ಮಾರ್ಗದರ್ಶನವನ್ನು, ವಿವಿಧ ಸಂಪುಟಗಳ ಸಂಪಾದಕರಾಗಿ ನಾಡಿನ ಅನೇಕ ವಿದ್ವಾಂಸರು ತೋರಿರುವ ಆಸಕ್ತಿ ಹಾಗೂ ನೆರವನ್ನು ಮತ್ತು ಈ ಸಂಪುಟದ ಸಂಪಾದಕರ ಶ್ರಮವನ್ನು ಸ್ಮರಿಸುತ್ತ ಕನ್ನಡ ಜನತೆಯ ಕೈಗೆ ಈ ಮೌಲಿಕ ಪ್ರಕಟಣೆಗಳನ್ನು ಸಂತೋಷದಿಂದ ಅರ್ಪಿಸುತ್ತೇನೆ.

ಶ್ರೀ ಸಿದ್ದರಾಮಯ್ಯ
ಮಾನ್ಯ ಮುಖ್ಯಮಂತ್ರಿಗಳು
 
 
 
 

        Copyright | Disclaimer | Privacy Policy | Contact us                     

Powered by Bloom Consulting Services.